19ನೆಯ ಶತಮಾನದ ಅಂತ್ಯದಲ್ಲಿ ಅನೇಕ ಮನಶ್ಯಾಸ್ತ್ರಜ್ಞರು ಆಲೋಚನಾಪ್ರಕ್ರಿಯೆಗಳನ್ನು ಅಂತರವಲೋಕನ ವಿಧಾನದಿಂದ ವಿಶ್ಲೇಷಿಸಿ ಆಲೋಚನೆ ಮಾಡುವಾಗ ಪ್ರತಿಮೆಗಳ ಪರಂಪರೆ ಇರಲೇಬೇಕೆಂದು ಹೇಳಿದರು. ಮತ್ತಿತರರು ಪ್ರತಿರೂಪಗಳಿಲ್ಲದ ಅಂದರೆ ಪ್ರತಿಮಾರಹಿತ ಆಲೋಚನೆ ಸಾಧ್ಯ ಎಂದು ವಾದಿಸಿದರು. ೧೯೦೯ರಲ್ಲಿ ಟಿಚ್ನರ್ ತನ್ನ ದಿ ಎಕ್ಸ್ಪಿರಿಮೆಂಟ್ ಎಂಬ ಸೈಕಾಲಜಿ ಆಫ್ ಥಾಟ್ ಪ್ರೋಸೆಸಸ್ ಎಂಬ ಪುಸ್ತಕದಲ್ಲಿ ಪ್ರತಿಮಾರಹಿತ ಆಲೋಚನೆ ಎಂಬುದೇ ಇಲ್ಲ ಎಂದು ವಾದಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ವುಡ್ವರ್ತ್ ತನ್ನ ಪೇರ್ ಆಫ್ ವರ್ಡ್ ಎಕ್ಸ್ಪಿರಿಮೆಂಟ್ ಎಂಬ ಪುಸ್ತಕದಲ್ಲಿ ಇಂದ್ರಿಯಾಂಶಗಳ ಪುನಃಸ್ಮರಣವಿಲ್ಲದೆ ಪ್ರತ್ಯಕ್ಷಾನುಭೂತಿಗಳು ಮರಳಿ ಮನಸ್ಸಿನಲ್ಲೆದ್ದಾಗ ಪ್ರತಿರೂಪವಿಲ್ಲದೆ ಚಿಂತನೆಗಳು ಮೈದೋರಬಹುದು ಎಂದು ಹೇಳಿದ್ದಾನೆ. 

ವರ್ತನಾವಾದಿಗಳ ಪ್ರಕಾರ ಮಾನಸಿಕ ವ್ಯಾಪಾರಗಳೆಲ್ಲವೂ ದೈಹಿಕ ವ್ಯಾಪಾರಗಳು. ಆದ್ದರಿಂದ ಇವರಿಗೆ ಪ್ರತಿರೂಪವಿಲ್ಲದೆ ಆಲೋಚನೆ ನಡೆಯುವುದಿಲ್ಲವೆಂಬ ವಾದ ಹಿಡಿಸಲಿಲ್ಲ. ಪ್ರಯೋಗಕ್ಕೊಳಗಾದ ವ್ಯಕ್ತಿಗಳು ತಾವು ಕಂಡ ಪ್ರತಿರೂಪಗಳನ್ನು ನಿರೂಪಿಸಿದ ಸಾಕ್ಷ್ಯಗಳಲ್ಲಿ ನಂಬಲರ್ಹವಾದ ಎಷ್ಟೋ ಅಂಶಗಳಿರುತ್ತಿದ್ದುವು. ಆದಕಾರಣ ಪ್ರತಿರೂಪವನ್ನು ಮನಶ್ಶಾಸ್ತ್ರದ ದತ್ತಾಂಶವಾಗಿ ನಂಬಿಕೆಯಿಂದ ಸ್ವೀಕರಿಸಲು ಸಾಧ್ಯವಾಗಲಿಲ್ಲ. ವ್ಯಾಟ್ಸನ್ ಆವೃತ್ತಚಲನದ ಭಾವನೆಯನ್ನು ಸೂಚಿಸಿದ. ಸ್ನಾಯು ಮತ್ತು ನರಗಳ ಉಪಕರಣಗಳಿಂದ ಕೂಡಿರುವ ಮಾನಸಿಕ ವ್ಯವಸ್ಥೆಯಲ್ಲಿ ಸೂಕ್ಷ್ಮವಾದ ಆಂತರಿಕ ಚಲನಗಳೊಂದಿಗೆ ಪ್ರತಿರೂಪರಹಿತ ಚಿಂತನೆ ಸಂಬಂಧ ಹೊಂದಿರುವುದೆಂಬ ಅಂಶ ಅನೇಕ ವೇಳೆ ಕಂಡುಬಂದಿದೆ. ಕಿವುಡು ಮೂಗರನ್ನಿಟ್ಟುಕೊಂಡು ನಡೆಸಿರುವ ಪ್ರಯೋಗಗಳಿಂದ ಈ ವಿಷಯ ಖಚಿತಗೊಂಡಿದೆ. ಚಿಂತನೆ ಎಂಬುದು ನರ ಮತ್ತು ಸ್ನಾಯುಗಳ ಅವ್ಯಕ್ತಚಲನಗಳಲ್ಲದೆ ಮತ್ತೇನೂ ಅಲ್ಲ ಎಂಬ ಸಿದ್ಧಾಂತಕ್ಕೆ ಈ ಪ್ರಯೋಗಗಳು ದಾರಿಮಾಡಿಕೊಟ್ಟಿವೆ. ಈ ಅತಿಗಾಮಿ ದೃಷ್ಟಿಯಲ್ಲಿ ಇಂಥ ಆಂತರಿಕ ಸೂಕ್ಷ್ಮಸ್ನಾಯು ಚಲನೆಗಳಿಂದಲೇ ಚಿಂತನೆ ಉದ್ಭವಿಸುತ್ತದೆ ಎಂಬುದಕ್ಕೆ ತಕ್ಕ ಸಾಕ್ಷ್ಯಗಳಿರಲಿಲ್ಲ. ಅಷ್ಟಲ್ಲದೆ ಬಾಹ್ಯವೋ ಆಂತರಿಕವೋ ಆದ ಯಾವುದೇ ಒಂದು ಕ್ರಿಯೆಯತ್ತ ಚಿಂತನೆ ಹರಿಯುತ್ತದೆ ಎಂಬುದು ನಮಗೆ ಗೋಚರಿಸುತ್ತದೆ. ಇದಕ್ಕೆ ಅಷ್ಟು ಪ್ರಾಶಸ್ತ್ಯವನ್ನು ಕೊಡದ ಸಮಷ್ಟಿ ಮನಶ್ಶಾಸ್ತ್ರ ಪಂಥದವರ ಅಭಿಪ್ರಾಯದ ಪ್ರಕಾರ, ಹಿಂದಿನ ಅನುಭವಗಳನ್ನು ಪುನರುದ್ದೀಪಿಸುವುದರಲ್ಲಿ ಚಿಂತನೆಯ ಪಾತ್ರ ತುಂಬ ಅಲ್ಪವಾದದ್ದು. ಚಿಂತನೆ ಎಂಬುದು ಯಾವಾಗಲೂ ಉತ್ಪಾದನಾನಿರತವಾಗಿದೆ. ಒಂದು ಸಮಸ್ಯಾತ್ಮಕ ಸಂದರ್ಭದಿಂದ ಉತ್ಪನ್ನವಾದ ಬಿಗಿತ ಅಥವಾ ಒತ್ತಡವೇ ಪ್ರತ್ಯಕ್ಷಕ್ಷೇತ್ರದ ಪುನರ್ವ್ಯವಸ್ಥೆ ಆವಶ್ಯಕಗೊಳಿಸುತ್ತದೆ. ಹಳೆಯ ಅನುಭವಗಳನ್ನು ನೆನೆದುಕೊಳ್ಳುವದಕ್ಕಿಂತ ಹೆಚ್ಚಾಗಿ, ಪ್ರತ್ಯಕ್ಷಕ್ಷೇತ್ರವನ್ನು ಪುನಾರಚಿಸುವ ಮತ್ತು ವ್ಯವಸ್ಥೆಗೊಳಿಸುವ ಕೆಲಸ ಚಿಂತನೆ ಮಾಡುವಾಗ ಹೆಚ್ಚಾಗಿ ನಡೆಯತ್ತದೆ. 

ಮೇಯಿರ್ ಉದಾಹರಣೆಯೊಂದನ್ನು ಕೊಟ್ಟಿದ್ದಾನೆ. ಹುಟ್ಟುತ್ತಲೇ ಕುರುಡನಾಗಿದ್ದು ತನ್ನ ಏಳನೆಯ ವರ್ಷದಲ್ಲಿ ದೃಷ್ಟಿಯನ್ನು ಪಡೆದುಕೊಂಡ ಹುಡುಗನೊಬ್ಬ ತತ್ಕ್ಷಣವೇ ಚಿತ್ರಲೇಖನದಲ್ಲೂ ಬಣ್ಣಗಳ ರಚನೆಯಲ್ಲೂ ತುಂಬ ಕೌಶಲವನ್ನು ತೋರಿದ. ಆತನಿಗೆ ಅದರಲ್ಲಿ ಶಿಕ್ಷಣ ದೊರೆತಿರಲಿಲ್ಲ. ಆ ಮನೆಯಲ್ಲಿ ಕಲೆಗೆ ತಕ್ಕ ಪ್ರೋತ್ಸಾಹವನ್ನು ಕೊಟ್ಟು ಬೆಳೆಸುವ ಪರಿಸರವೂ ಇರಲಿಲ್ಲ. ಈ ಪ್ರಕಾರವಾಗಿ, ಸೃಷ್ಟ್ಯಾತ್ಮಕ ಚಿಂತನೆಗೆ ಹಿಂದಿನ ಪ್ರತಿರೂಪಗಳು ಅನವಶ್ಯಕವೆಂಬುದು ಇದರಿಂದ ತಿಳಿದುಬರುತ್ತದೆ. ಹಿಲ್ಗಾರ್ಡ್ ಸಹ ಚಿಂತನಾಪ್ರಕ್ರಿಯೆಯಲ್ಲಿ ಪ್ರತಿರೂಪದ ಪ್ರಾಮುಖ್ಯದ ವಿಷಯದಲ್ಲಿ ಮಧ್ಯಮಾರ್ಗಾವಲಂಬಿ ದೃಷ್ಟಿಯುಳ್ಳವನಾಗಿದ್ದಾನೆ. ಆತನ ಪ್ರಕಾರ, ಆಲೋಚಿಸುವಾಗ ಒಬ್ಬ ಮನುಷ್ಯ ಈ ಪ್ರಕ್ರಿಯೆಗಳನ್ನು ತೋರಿಸುತ್ತಾನೆ : ೧.ಪ್ರತಿರೂಪಗಳು. ೨.ಅಧ್ವನಿತವಾದ ಮಾತು ಮತ್ತು ಇತರ ಚಲನಗಳು. ೩.ಶಬ್ದಗಳು, ಚಿಹ್ನೆಗಳು ಮತ್ತು ಸಂಕೇತಗಳು. ೪.ಅಮೂರ್ತ ಭಾವನೆಗಳು, ಅಮೂರ್ತ ಚಿಂತನೆಗಿಂತ ಮೂರ್ತಚಿಂತನೆ ಹೆಚ್ಚು ಸರಾಗವಾದದ್ದು. ಆದರೆ ಒಬ್ಬಾತ ಅಮೂರ್ತವಾಗಿ ಚಿಂತಿಸಲು ಸಮರ್ಥನಲ್ಲದಿದ್ದರೆ ಸದ್ಯದ ಕ್ಷಣಕ್ಕಿಂತ ದೂರಗಾಮಿಯಾದ ಸಮಸ್ಯೆಗಳನ್ನು ಕುರಿತು ಆತ ಚಿಂತಿಸಲಾರ. ಅಮೂರ್ತವಾಗಿ ಚಿಂತಿಸುವಾಗ ಸಮಸ್ತವಾಹಕಾಂಶಗಳನ್ನಲ್ಲದೆ ಯಾವ ಚಿಂತನಾವಾಹಕಾಂಶಗಳನ್ನಾದರೂ ಉಪಯೋಗಿಸಿಕೊಳ್ಳಬಹುದಾಗಿದೆ. ಈ ಪ್ರಕಾರ ಆಲೋಚಿಸಿ ಪ್ರತಿಮೆಗಳಿಂದ ಕೆಲವು ಸಮಯಗಳಲ್ಲಿ ಕೂಡಿರುವುದೆಂದೂ ಮತ್ತೆ ಕೆಲವು ಸಮಯಗಳಲ್ಲಿ ಪ್ರತಿಮಾರಹಿತವಾಗಿರಬಹುದೆಂದೂ ಕಂಡುಹಿಡಿಯಲಾಗಿದೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ